ಬ್ರೂಸ್ಟರ್, ಡೇವಿಡ್
	1781-1868. ಸ್ಕಾಟ್ಲೆಂಡಿನ ಭೌತವಿಜ್ಞಾನಿ 1781 ಡಿಸೆಂಬರ್ 11ರಂದು ಜನನ. 1868 ಫೆಬ್ರುವರಿ 10ರಂದು ಮರಣ. ಕಲಿತದ್ದು ಧರ್ಮಶಾಸ್ತ್ರ. ಧರ್ಮೋಪದೇಶ ನೀಡಲು ಮಠದಿಂದ ಅನುಮತಿ ಪಡೆದ. ಆದರೆ ಉತ್ಸಾಹ ಚಿಗುರಿದ್ದು ವಿಜ್ಞಾನ ವಿಷಯಗಳ, ತತ್ರಾಪಿ ಭೌತ ವಿಜ್ಞಾನದ ಬಗ್ಗೆ.

	ಬ್ರೂಸ್ಟರನ ಪ್ರಥಮ ಸಂಶೋಧನೆಗಳು ಬೆಳಕಿನ ಧ್ರುವೀಕರಣ ಕುರಿತವು. ದ್ಯುತಿವಿಜ್ಞಾನದಲ್ಲಿ ಈತ ಶೋಧಿಸಿದ ಮುಖ್ಯ ಫಲಿತಾಂಶಗಳಿವು : 1 ಪ್ರತಿಫಲನ ಮತ್ತು ಏಕ್ರೀಭವನದಿಂದ ಧ್ರುವೀಕರಣದ ನಿಯಮಗಳನ್ನು ಪಡೆಯುವುದು. 2  ಯಾವುದೇ ಲೋಹದ ಮೇಲ್ಮೈ ಬೆಳಕನ್ನು ಪ್ರತಿಫಲಿಸಿದಾಗ ಕಂಡುಬರುವ ನಿಯಮಗಳು. 3 ಇಂಥ ಸಂದರ್ಭಗಳಲ್ಲಿ ಬೆಳಕು ಎಷ್ಟು ಹೀರಲ್ಪಡುತ್ತದೆಂದು ತಿಳಿಸುವ ಸೂತ್ರ. 4  ದ್ವಿವಕ್ರೀಭವನ ಉಂಟುಮಾಡುವ ಎರಡು ಅಕ್ಷಗಳನ್ನು ಹೊಂದಿರುವ ಹರಳುಗಳ ಆವಿಷ್ಕಾರ. 5  ಪದಾರ್ಥಗಳನ್ನು ಕಾಸಿದಾಗ ಅಥವಾ ಅವನ್ನು ಒತ್ತಡಕ್ಕೆ ಒಳಪಡಿಸಿದಾಗ ಧ್ರುವೀಕರಣ ಹೇಗೆ ಉಂಟಾಗುತ್ತದೆ. 6. ಬೆಳಕಿನ ವ್ಯಾವರ್ತನದಿಂದ (ಬೈಡಿಫ್ರ್ಯಾಕ್ಷನ್) ದೊರೆತ ಮಾಹಿತಿಗಳು.

	ಈತ ಏಡಿನ್‍ಬರೊ ಮ್ಯಾಗಝೀನ್ ಮತ್ತು ಸ್ಕಾಟ್ಸ್ ಮ್ಯಾಗಝೀನ್ ನಿಯತ ಕಾಲಿಕೆಗಳ ಸಂಪಾದಕನಾಗಿಯೂ (1802-06) ಎಡಿನ್‍ಬರೊ ವಿಶ್ವಕೋಶದ ಸಂಪಾದಕನಾಗಿಯೂ (1807-30) ವಿಜ್ಞಾನ ರಂಗದಲ್ಲಿ ದುಡಿದ. ಜೀನ್ ಬ್ಯಾಪ್ಟಿಸ್ಟೆಬಯೊ (1774-1862 ಫ್ರೆಂಚ್ ಭೌತವಿಜ್ಞಾನಿ) ಪ್ರವಾಹಿಗಳ ಮೇಲೆ ಬೆಳಕು ಉಂಟು ಮಾಡುವ ಪರಿಣಾಮಗಳನ್ನು ತಿಳಿಯಲು ಮಾಡಿದ ಪ್ರಯೋಗಗಳನ್ನು ಬ್ರೂಸ್ಟರ್ ಪುನರಾವರ್ತಿಸಿ ಕಲೈಡೊಸ್ಕೋಪನ್ನು (ಬಹುಚಿತ್ರದರ್ಶಕ) ಉಪಜ್ಞಿಸಿದ.

	ವಿಜ್ಞಾನದ ಮುನ್ನಡೆಗೆ ಮುಡಿಪಾಗಿದ್ದ ಬ್ರಿಟಿಷ್ ಸಂಸ್ಥೆಗಳ ಮೂಲ ಪುರುಷರ ಪೈಕಿ ಬ್ರೂಸ್ಟರ್ ಒಬ್ಬ. ಈ ಸಂಸ್ಥೆಗಳ ಮೊದಲಿನ ಸಭೆ 1831 ರಲ್ಲಿ ಯಾರ್ಕ್‍ನಲ್ಲಿ ಸೇರಿತು. ಎಡಿನ್‍ಬರೋದಲ್ಲಿ ನಡೆದ ಅದರ 20ನೆಯ ವಾರ್ಷಿಕ ಸಮ್ಮೇಳನಕ್ಕೆ ಈತ ಅಧ್ಯಕ್ಷನಾದ 1850 . 1832 ರಲ್ಲಿ ಈತನಿಗೆ ನೈಟ್‍ಹುಡ್ ದೊರೆಯಿತು
(ಸಿ.ಕೆ.ವಿ.: ಕೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ